Toll Free No: 1800-425-0889

Home | Contact

Chairman's Message


Dr.M.N.Rajendra Kumar

ಸಹಕಾರ ಕ್ಷೇತ್ರಕ್ಕೆ ಆದರ್ಶವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿ, ಆಧುನಿಕ ಬ್ಯಾಂಕಿಂಗ್ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿರುವ ನಮ್ಮ ಬ್ಯಾಂಕ್ ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನಮನ್ನಣೆಯನ್ನು ಗಳಿಸಿಕೊಂಡಿದೆ. ಜನಸೇವೆಯಲ್ಲಿ ಸಾರ್ಥಕತೆಯನ್ನು ಕಂಡಿರುವ ನಮ್ಮ ಬ್ಯಾಂಕ್ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಬ್ಯಾಂಕ್ ಸಹಕಾರ ರಂಗದಲ್ಲಿ ವಿಶಿಷ್ಟ, ವಿನೂತನ ಸಾಧನೆಯೊಂದಿಗೆ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಗಿ ಜನಾನುರಾಗಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನೆಯ 111 ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವರದಿ ವರ್ಷದಲ್ಲಿ ಬ್ಯಾಂಕ್ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿ ಸಾಧಿಸಿದ ಯಶಸ್ಸು ಅಪೂರ್ವವಾದದ್ದು. ಈ ಯಶಸ್ಸಿನ ಮೂಲ ಸೆಲೆಗೆ ಗೌರವಾನ್ವಿತರಾದ ತಾವೆಲ್ಲರೂ ಕಾರಣಕರ್ತರು ಎನ್ನುವುದನ್ನು ಸ್ಮರಿಸುತ್ತಾ, ತಮ್ಮೆಲ್ಲರನ್ನು ಬ್ಯಾಂಕಿನ 111ನೇ ವಾರ್ಷಿಕ ಮಹಾಸಭೆಗೆ ಆಡಳಿತ ಮಂಡಳಿಯ ಪರವಾಗಿ ಹಾಗೂ ನನ್ನ ವೈಯಕ್ತಿಕ ನೆಲೆಯಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸುತ್ತೇನೆ.

ವಿನೂತನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿ ಗ್ರಾಹಕರಿಗೆ ಉತ್ಕøಷ್ಟ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್‍ನೆಟ್, ಕೋರ್ ಬ್ಯಾಂಕಿಂಗ್‍ನಂತಹ ಉನ್ನತ ಸೇವೆಯು ಬ್ಯಾಂಕಿನ 113 ಶಾಖೆಗಳಲ್ಲಿ ದೊರೆಯುತ್ತಿದೆ. ಮೊಬೈಲ್ ಆ್ಯಪ್, ಟ್ಯಾಬ್ ಬ್ಯಾಂಕಿಂಗ್‍ನಂತಹ ವಿನೂತನ ವ್ಯವಸ್ಥೆಯನ್ನು ಬ್ಯಾಂಕ್ ಗ್ರಾಹಕರಿಗೆ ಈಗಾಗಲೇ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ “ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್” ಹಾಗೂ “ಯುನಿಫೈಡ್ ಪೇಮೆಂಟ್ ಇಂಟರ್‍ಫೇಸ್ (ಯುಪಿಐ)” ಯೋಜನೆಯನ್ನು ರೂಪಿಸಲು ಬ್ಯಾಂಕ್ ಮುಂದಾಗಿದೆ. ವರದಿ ವರ್ಷದಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಬ್ಯಾಂಕ್ ಹಮ್ಮಿಕೊಂಡಿದೆ.

ಸಾರ್ವಜನಿಕ ಸೇವೆಯಲ್ಲಿ ಸುದೀರ್ಘ ಕಾಲ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. 31-03-2025ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.110.41 ಕೋಟಿ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಬ್ಯಾಂಕ್ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ.

ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ವರದಿ ವರ್ಷದಲ್ಲಿ ರೂ.17434.15 ಕೋಟಿಗಳ ಒಟ್ಟು ವ್ಯವಹಾರ ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ನಮ್ಮ ಬ್ಯಾಂಕ್ 113 ಶಾಖೆಗಳ ಮೂಲಕ ಒಟ್ಟು ರೂ.7947.18 ಕೋಟಿ ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೂ ಪಾತ್ರವಾಗಿದೆ.

ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.7775.44 ಕೋಟಿ ಮುಂಗಡ ನೀಡಿದೆ. 1086 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು ಪಾಲು ಬಂಡವಾಳ ರೂ.476.00 ಕೋಟಿ, ಬ್ಯಾಂಕಿನ ದುಡಿಯುವ ಬಂಡವಾಳ ರೂ.12873.14 ಕೋಟಿ. ಬ್ಯಾಂಕ್ ರೂ.270.15 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ.

ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ ನೂರು ಮರುಪಾವತಿಯನ್ನು ಕಂಡಿವೆ. ಇಂತಹ ಸಾಧನೆಯನ್ನು ಬ್ಯಾಂಕ್ ಕಳೆದ 30 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 17 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ ನೂರರ ಸಾಧನೆ ಮಾಡಿದೆ. ಈ ಸಂದರ್ಭದಲ್ಲಿ ಈ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸುತ್ತೇನೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಂಘಟನೆಗೆ ಭದ್ರ ನೆಲೆಯನ್ನು ಒದಗಿಸಿದ ಈ ಬ್ಯಾಂಕ್ ಒಟ್ಟು 34,621 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ ರೂ.174.31 ಕೋಟಿ. ಒಟ್ಟು 34,613 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು ರೂ.497.36 ಕೋಟಿ ಸಾಲ ಹೊರಬಾಕಿ ಇರುತ್ತದೆ.

ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನಪರ ಯೋಜನೆಗಳೊಂದಿಗೆ ದೇಶದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಒಟ್ಟು 22 ಬಾರಿ ದೊರೆತಿದೆ. ಮಾತ್ರವಲ್ಲದೆ, ಸ್ವಸಹಾಯ ಗುಂಪುಗಳ ನಿರ್ವಹಣೆಗೂ 19 ಬಾರಿ ನಬಾರ್ಡ್ ಪ್ರಶಸ್ತಿ ಬ್ಯಾಂಕಿಗೆ ಲಭಿಸಿದೆ. ವರದಿ ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ನಮ್ಮ ಬ್ಯಾಂಕಿಗೆ “ಎಪಿವೈ ರಾಷ್ಟ್ರೀಯ ಪ್ರಶಸ್ತಿ” ನಾಲ್ಕನೇ ಬಾರಿ ಬಂದಿರುವುದು ಸಂತೋಷದ ವಿಚಾರ.

ಸಹಕಾರ ಸಂಸ್ಥೆಗಳ ಆರ್ಥಿಕ ಬಲವರ್ಧನೆಗೆ ಸದಾ ಮುಂದಾಗಿರುವ ಈ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಯೊಂದಿಗೆ ಗುರುತಿಸಿಕೊಂಡಿದೆ. ಈ ಸಾಧನೆಗಳ ಸಾಧನಾ ಶಕ್ತಿಗಳು ಉಭಯ ಜಿಲ್ಲೆಗಳ ಸಮಸ್ತ ಜನತೆ ಮತ್ತು ಸಹಕಾರಿ ಬಂಧುಗಳು ಎನ್ನುವುದನ್ನು ಸ್ಮರಿಸುತ್ತಾ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

|| ಜೈ ಸಹಕಾರ ||

ಡಾ|| ಎಂ. ಎನ್. ರಾಜೇಂದ್ರ ಕುಮಾರ್
ಅಧ್ಯಕ್ಷರು